ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಶೇಣಿ ಪ್ರಶಸ್ತಿ ಪ್ರದಾನದ ಎತ್ತರದ ಶ್ರೇಣಿ

ಲೇಖಕರು : ಪ್ರತಿಭಾ ಎಂ. ಎಲ್‌. ಸಾಮಗ
ಸೋಮವಾರ, ಆಗಸ್ಟ್ 5 , 2013
ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ದಂತಕಥೆ ಎನಿಸಿದ ಶೇಣಿ ಗೋಪಾಲಕೃಷ್ಣ ಭಟ್ಟರ ಹೆಸರಿನಲ್ಲಿ ಪ್ರದಾನ ಮಾಡುವ ವಾರ್ಷಿಕ `ಶೇಣಿ ಪ್ರಶಸ್ತಿ ಸಮಾರಂಭ`ವು ಕಾಸರಗೋಡಿನ ಶೇಣಿಯಿಂದ ತನ್ನ ಅಭಿಯಾನವನ್ನು ಆರಂಭಿಸಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳನ್ನು ಹಾದು ಉತ್ತರ ಕನ್ನಡದ ಶಿರಸಿಯಲ್ಲಿ ಸಂಭ್ರಮಿಸಿದ್ದು ಶೇಣಿ ವಿಶ್ವಸ್ಥ ಮಂಡಳಿ ಹಾಗೂ ಶಿರಸಿಯ 'ಯಕ್ಷಸಂಭ್ರಮ`ದ ಒಂದು ಯಶಸ್ವೀ ಪ್ರಯತ್ನ. ಕಳೆದ ಜುಲೈ 20 ಹಾಗೂ 21ರಂದು ನಡೆದ ಈ ಕಾರ್ಯಕ್ರಮ ಅನೇಕ ಕಾರಣಗಳಿಂದ ಒಂದು ಆದರ್ಶ ಕಾರ್ಯಕ್ರಮವೆನಿಸಿತು.

ಸರಳ ಉದ್ಘಾಟನೆ, ಮೂರು ತಾಳಮದ್ದಳೆ ಕೂಟಗಳು, ವಿಚಾರಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭಗಳು ಈ ಸಂಭ್ರಮದ ಮುಖ್ಯ ಘಟನೆಗಳು. ಶಿರಸಿಯ ಸಾಂಸ್ಕೃತಿಕ ಹರಿಕಾರ ಪ್ರಮೋದ್‌ ಹೆಗಡೆಯವರು ದೀಪ ಬೆಳಗಿಸಿ ಯಕ್ಷಗಾನದ ಅರಿವು - ಉಳಿವಿನ ಬಗ್ಗೆ ಸೊಗಸಾಗಿ ಆಡಿದ ನುಡಿಗಳೇ ಇಡೀ ಕಾರ್ಯಕ್ರಮವು ಒಟ್ಟಂದದಲ್ಲಿ ಬೆಳಗಲು ಕಾರಣವಾಯಿತು. ವೇದಿಕೆಯಲ್ಲಿ ಉದ್ಘಾಟಕರು ಮಾತ್ರ ಇದ್ದು, ಅವರು ಕಾರ್ಯಕ್ರಮವನ್ನು ಚೊಕ್ಕವಾಗಿ ನಡೆಸಿಕೊಟ್ಟದ್ದು ಅಚ್ಚುಕಟ್ಟುತನವನ್ನು ಕಾಣಿಸಿತು. ಆ ದಿನ ಅವಳಿ ತಾಳಮದ್ದಳೆ ಕೂಟಗಳು- ಪಾದುಕಾ ಪ್ರದಾನ ಹಾಗೂ ವಿಭೀಷಣ ಪ್ರಪತ್ತಿ. ಇವುಗಳಲ್ಲಿ ಹಿಮ್ಮೇಳ -ಮುಮ್ಮೇಳದ 16 ಮಂದಿ ಹಿರಿಯ ಈಗಿನ ತಲೆಮಾರಿನ ಹೆಸರಾಂತ ಕಲಾವಿದರು ತಿಟ್ಟುಗಳ ಭೇದವಿಲ್ಲದೆ ಭಾಗವಹಿಸಿದರು. ತುಸು ದೀರ್ಘ‌ವಾಯಿತೆಂದು ಕಂಡುಬಂದರೂ ಈ ಕೂಟಗಳು ಪೌರಾಣಿಕ ಪ್ರಪಂಚದಲ್ಲಿ ಅಡಗಿದ ನೈತಿಕ ಮೌಲ್ಯಗಳನ್ನು ಆಸ್ತಿಕತೆಯೊಡನೆ ಮೇಳೈಸಿ ನೆರೆದ ಶ್ರೋತೃಗಳನ್ನು ರಂಜಿಸಿ, ಚಿಂತನೆಗೀಡು ಮಾಡುವಲ್ಲಿ ಸಫ‌ಲವಾದವು.

ಮರುದಿನ ಬೆಳಗ್ಗಿನಿಂದ ನಡುರಾತ್ರಿಯವರೆಗೂ ನಡೆದ ಕಾರ್ಯಕ್ರಮದಲ್ಲಿ ಕಲಾವಿದರು, ವಿದ್ವಾಂಸರು, ಪ್ರೇಕ್ಷಕರು ಹಾಗೂ ಸಂಘಟಕರು ತಮ್ಮನ್ನು ತಾವು ತೊಡಗಿಸಿ ಕೊಂಡ ರೀತಿ ಯಕ್ಷಗಾನ ಮತ್ತು ಶೇಣಿಯವರಿಗಿರುವ ಚುಂಬಕ ಶಕ್ತಿಗೆ ಸಾಕ್ಷಿಯಾಗಿತ್ತು.

ಶೇಣಿ ಪ್ರಶಸ್ತಿ ವಿಜೇತ ಕರ್ಕಿ ನಾರಾಯಣ ಹಾಸ್ಯಗಾರ
ಶೇಣಿಯವರ ಕಲಾ ಬದುಕಿನ ಬಗೆಗಿನ ಗೋಷ್ಠಿಯಲ್ಲಿ ಪ್ರೊ| ಎಂ. ಎ. ಹೆಗಡೆ ಹಾಗೂ ಡಾ| ವಿಜಯ ನಳಿನಿ ರಮೇಶ್‌ ತಮ್ಮ ವಿಚಾರಗಳನ್ನು ಸಮರ್ಥವಾಗಿ ಮಂಡಿಸಿದರು. ಗೋಷ್ಠಿಯ ಒಟ್ಟು ವಿಚಾರಗಳನ್ನು ಕೂಲಂಕಷವಾಗಿ ತೆರೆದಿಟ್ಟವರು ಡಾ| ಜಿ. ಎಲ್‌. ಹೆಗಡೆ. ಮಧ್ಯಾಹ್ನ ಭೋಜನದ ಬಳಿಕ ಶ್ರೀಕೃಷ್ಣ ಪರಂಧಾಮ ಎಂಬ ಸುದೀರ್ಘ‌ ತಾಳಮದ್ದಳೆ ಕೂಟವು ಸುಮಾರು 22 ಮಂದಿ ಕಲಾವಿದರ ಸಮ್ಮಿಲನದಿಂದ ಯೋಗ್ಯ ಮತ್ತು ಆಪ್ತ ರೀತಿಯಲ್ಲಿ ನಡೆಯಿತು. ಈ ಕೂಟಕ್ಕೊಂದು ಕಿರು ವಿರಾಮವನ್ನು ಕಲ್ಪಿಸಿ ಅಲ್ಲಿ ಶೇಣಿ ಪ್ರಶಸ್ತಿ ಪ್ರದಾನವನ್ನು ಆಯೋಜಿಸಿದ್ದು ಸಂಘಟಕರ ಜಾಣತನ.

ಪ್ರಶಸ್ತಿ ಪ್ರದಾನ ಸಮಾರಂಭ ಒಂದೇ ತಾಸಿಗೆ ಸೀಮಿತಗೊಂಡರೂ ಹಿರಿಯ ವಿದ್ವಾಂಸರು, ಕಲಾವಿದರು, ಪ್ರಶಸ್ತಿ ವಿಜೇತ ಕರ್ಕಿ ನಾರಾಯಣ ಹಾಸ್ಯಗಾರ ಮೊದಲಾದವರ ಹಿತಮಿತವಾದ, ಚಿಂತನೀಯ ನುಡಿಗಳಿಂದ ಕಳೆಗಟ್ಟಿತು. ಇದಕ್ಕೆ ಮುಕುಟಪ್ರಾಯ ವಾಗಿತ್ತು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಚನ. ಕರ್ಕಿ ಹಾಸ್ಯಗಾರರನ್ನು ಸಮ್ಮಾನಿಸಿ ಶೇಣಿ ಹಾಗೂ ತಮ್ಮ ನಡುವಣ ಆತ್ಮೀಯ ಸಂಬಂಧವನ್ನು ನೆನಪಿಸುತ್ತಾ ಸಮಾರಂಭಕ್ಕೆ ಶಿಖರೋಪ ನ್ಯಾಸ ನೀಡಿ ಯಕ್ಷಗಾನದ ಮೌಲಿಕತೆಗೆ ಅವರು ಮಾರ್ಗದರ್ಶನ ಮಾಡಿದರು.

ಅನಂತರ ಮುಂದುವರಿದ ತಾಳಮದ್ದಳೆ ಕೂಟವು ಹಲವು ಆಯಾಮಗಳಲ್ಲಿ ನೆರೆದ ರಸಿಕರಿಗೆ ಮೋಡಿ ಮಾಡಿತು. ಭಾವಪೂರ್ಣ ಭಾಗವತಿಕೆ, ಅದನ್ನು ಸರಿದೂಗಿದ ಚೆಂಡೆ -ಮದ್ದಳೆ ವಾದನ, ಇದಕ್ಕೆ ಅರ್ಥವತ್ತಾಗಿ ಪ್ರತಿಸ್ಪಂದಿಯಾಗಿ ಅನಾವರಣಗೊಂಡ ಪಾತ್ರಗಳು ತಾಳಮದ್ದಳೆಯ ಕೇಳ್ಮೆ ನಮ್ಮಲ್ಲಿ ಬುದ್ಧಿ ಹಾಗೂ ಭಾವ ಪ್ರಭೋದಕ ವಿಚಾರಗಳನ್ನು ಸ್ಪುರಿಸಬಲ್ಲುದೆಂಬುದನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಶಕ್ತವಾಯಿತು.

ದೂರದ ಶಿರಸಿಯಲ್ಲಿ ಜರಗಿದ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭ ಅನೇಕ ಕಾರಣಗಳಿಂದ ವಿಶಿಷ್ಟ ಎನಿಸಿದ್ದು ಶೇಣಿ ವಿಶ್ವಸ್ಥ ಮಂಡಳಿ, ಶಿರಸಿಯ "ಯಕ್ಷ ಸಂಭ್ರಮ`, ಭಾಗವಹಿಸಿದ ಕಲಾವಿದ ಗಡಣ, ಶಿರಸಿಯ ಆಸಕ್ತ ಪ್ರೇಕ್ಷಕರು ಮತ್ತು ಪ್ರಾಯೋಜಕರ ಕಳಕಳಿಯ ಕೈಗೂಡಿಸುವಿಕೆಯಿಂದ ಎಂಬುದು ನಿಜ. ಉತ್ತಮ ಸಭಾಗೃಹ, ಧ್ವನಿ ವರ್ಧಕ, ರುಚಿಕಟ್ಟಾದ ಊಟೋಪಚಾರ, ಚಿಕ್ಕಚೊಕ್ಕ ಸಭಾ ಕಾರ್ಯಕ್ರಮಗಳು, ಶಿರಸಿಯ ತೀವ್ರ ಚಳಿಯಲ್ಲೂ ಮನಸ್ಸು, ಬುದ್ಧಿಯನ್ನು ಬೆಚ್ಚಗಾಗಿಸಿದ ಕಲಾವಿದರ ಕಲಾಪಾಕಗಳು, ಶೇಣಿಯವರ ಪ್ರಸಿದ್ಧಿಯ ವ್ಯಾಪ್ತಿಯನ್ನು ಪ್ರಚುರಪಡಿಸಿದ ಸಂಯೋಜಕರ ಅಪಾರ ದುಡಿಮೆ - ಇವೆಲ್ಲ ಮೆಚ್ಚಲೇ ಬೇಕಾದ ಸಂಗತಿಗಳು.



ಕೃಪೆ : http://udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ